ಹೀಬ್ರೂ
	ಪ್ಯಾಲಿಸ್ತೀನಿನ ಯಹೂದಿ ಸಮುದಾಯ ಅಥವಾ ಪಂಗಡ. ಸಿರಿಯದೇಶದ ದಕ್ಷಿಣಕ್ಕೆ ಪ್ಯಾಲಿಸ್ತೀನ್ ದೇಶವಿದ್ದು ಇದು ಹೀಬ್ರೂ ಜನರ ನೆಲೆಬೀಡಾಗಿತ್ತು. ಇವರು ಏಕೇಶ್ವರ ವಾದಿಗಳು. ತಮ್ಮ ಧಾರ್ಮಿಕ ಭಾವನೆಗಳಿಂದ ಅನಂತರದ ತಲೆಮಾರಿನ ಜನಸಮುದಾಯಗಳ ಮೇಲೆ ವಿಪುಲವಾದ ಪ್ರಭಾವ ಬೀರಿದವರು. ಚಿಕ್ಕದೇಶ ಪ್ಯಾಲಿಸ್ತೀನ್ ಕ್ರೈಸ್ತಧರ್ಮದ ತವರೂರೂ ಆಗಿದೆ. ಪಾಶ್ಚಿಮಾತ್ಯರು ಇದನ್ನು “ಪವಿತ್ರ ಭೂಮಿ” ಎಂದು ಕರೆಯುತ್ತಿದ್ದರು.

	ಹಳೆ ಒಡಂಬಡಿಕೆಯಲ್ಲಿ ಹೀಬ್ರೂಗಳು ತಮ್ಮನ್ನು ಇಸ್ರೇಲಿನ ಪುತ್ರರು ಎಂದು ಹೇಳಿಕೊಂಡಿದ್ದಾರೆ. ಇಸ್ರೇಲ್ ಎಂಬ ಹೆಸರಿನ ಮೂಲ ತಿಳಿಯದಾಗಿದೆ. ಇದನ್ನು ದೇವನು ಪ್ರಯತ್ನಿಸುತ್ತಾನೆ ಯಾ ಫಲಕೊಡುತ್ತಾನೆ, ಎಂದು ಅರ್ಥೈಸಲಾಗಿದೆ. ಸಾಂಪ್ರದಾಯಿಕವಾಗಿ ಹೀಬ್ರೂ ಪದಕ್ಕೆ ಯಾಫ್ರಟಿಸ್ ಅಥವಾ ಜಾರ್ಡ್‍ನ ನದಿಯಾಚೆಯಿಂದ ಬಂದ ಜನರೆಂದು ಅಭಿಪ್ರಾಯ. ಜ್ಯೂ ಅಥವಾ ಯಹೂದಿ ಎಂದರೆ ಜುಡಾ ದೇಶದವನೆಂದರ್ಥ. ಆದುದರಿಂದ ಯಹೂದಿ ದಕ್ಷಿಣ ಪ್ಯಾಲಿಸ್ತೀನಿನವನು. ಬಹುಶಃ ಇಸ್ರೇಲ್ ಮತ್ತು ಹೀಬ್ರೂ ಎಂಬ ಹೆಸರುಗಳು ಮೂಲದಲ್ಲಿ ಕುಲನಾಮಗಳಾಗಿರಬೇಕು.

	ಮರುಭೂಮಿ ಪ್ರದೇಶದ ಅರೇಬಿಯನ್ನರು ಆಗಾಗ್ಗೆ ಈ ಪ್ರದೇಶದ ಫಲವತ್ತಾದ ಭಾಗಗಳ ಮೇಲೆ ದಾಳಿನಡೆಸಿ ಅಲ್ಲಲ್ಲಿ ನೆಲೆಮಾಡಿ ಕೊಳ್ಳುವುದು ಸಾಮಾನ್ಯವಾಗಿತ್ತು. ಮರುಭೂಮಿಯ ಜನರಿಗೆ ಇದು ಆಶ್ವಾಸನೆಯ ಪ್ರದೇಶ ಆಗಿತ್ತು. ಅರೇಬಿಯದ ವಲಸೆಗಾರರಲ್ಲಿ ಕೆಲವರು ಜೋರ್ಡನ್ ನದಿಯ ಪಶ್ಚಿಮಕ್ಕಿರುವ ಗುಡ್ಡಗಳಲ್ಲಿ ಕ್ರಿ.ಪೂ. ಸು.3000ಕ್ಕೂ ಹಿಂದಿನಿಂದ ನೆಲೆಸಲು ಪ್ರಾರಂಭಿಸಿದ್ದರು. ಹೀಗೆ ನೆಲೆನಿಂತ ವಲಸೆಗಾರರು ಸೆಮಿಟಿಕ್ ಭಾಷೆಯನ್ನು ಮಾತನಾಡುವ ಕೆನ್ನನ್ಯಾಟ್ ಜನರಾಗಿದ್ದು, ತಮ್ಮ ಮೂಲ ಪ್ರದೇಶದ ಕಸಬುಗಳನ್ನು ಬಿಟ್ಟು, ಕೃಷಿಕರಾಗಿ ಗ್ರಾಮಗಳನ್ನು ನಿರ್ಮಿಸಿಕೊಂಡು, ಬಾಲ್ ದೇವತೆಯನ್ನು ಪೂಜಿಸಿ ಪ್ರಾಣಿಬಲಿಯನ್ನು ಕೊಡುತ್ತಿದ್ದರು. ಇವರು ಈಜಿಪ್ಟ್ ಮತ್ತು ಮೆಸಪೊಟೇಮಿಯ ಜನರಿಂದ ಅನೇಕ ವಿಷಯಗಳನ್ನು ಕಲಿತುಕೊಂಡ ರಲ್ಲದೆ, ಈಜಿಪ್ಟಿನ ದೊರೆಗಳಾದ ಫೆರೂಗಳಿಗೆ ಕಪ್ಪ ಕೊಡುತ್ತಿದ್ದರು. ಕ್ರಿ.ಪೂ 14ನೆಯ ಶತಮಾನದಲ್ಲಿ ಪ್ಯಾಲಿಸ್ತೀನಿನ ಈಜಿಪ್ಟ್ ಆಡಳಿತಗಾರರು ಸರ್ಕಾರಕ್ಕೆ ಬರೆಯುತ್ತಿದ್ದ ಪತ್ರ ವ್ಯವಹಾರಗಳಲ್ಲಿ, ಆಗಿಂದಾಗ್ಗೆ ದಾಳಿ ನಡೆಸುತ್ತಿದ್ದ ಈ ಪಂಗಡವನ್ನು ಹಬಿರು ಎಂಬುದಾಗಿ ನಾಮಕರಣ ಮಾಡಿದ್ದರು. ಈ ಹಬಿರು ಪದದಿಂದಲೆ ಹೀಬ್ರೂ ಎಂಬ ಶಬ್ದ ನಿಷ್ಪನ್ನಗೊಂಡಿತು. ಈ ವ್ಯವಹಾರ ಪತ್ರಗಳಿಂದ ಹೀಬ್ರೂ ಜನಸಮುದಾಯ ಪ್ಯಾಲಿಸ್ತೀನಿಗೆ ಬಂದ ವಿವರ ತಿಳಿದುಬರುತ್ತದೆ. ಅಲ್ಲದೆ ಇವರು ತಮ್ಮ ಚರಿತ್ರೆಯನ್ನು ದಾಖಲೆಮಾಡಿಟ್ಟಿದ್ದರು. ಹಳೆ ಒಡಂಬಡಿಕೆ (ಓಲ್ಡ್ ಟೆಸ್ಟಮೆಂಟ್) ಇವರ ಧಾರ್ಮಿಕ ಗ್ರಂಥ.

	ಹಳೆಒಡಂಬಡಿಕೆಯ ಪ್ರಕಾರ ಅಬ್ರಹಾಮ್ ಎಂಬಾತ ಹೀಬ್ರೂ ಜನರ ಮೂಲ ಪುರುಷ. ಇವನು ಸಕುಟುಂಬವಾಗಿ ಮೆಸಪೊಟೇಮಿಯದ ಉರ್ ನಗರದಲ್ಲೂ(ಹಮೂರಾಬಿಯ ಕಾಲದಲ್ಲಿ), ಅನಂತರ ಅರೇಬಿಯದ ಮರಳುಗಾಡಿನಲ್ಲೂ ಸಂಚರಿಸುತ್ತಿದ್ದ. ಇವನ ಪೀಳಿಗೆಯವರು ಕ್ಷಾಮಪೀಡಿತರಾಗಿ ಗೋಶೇನ್ ಭೂಮಿ ಎಂದು ಕರೆಯಲ್ಪಡುತ್ತಿದ್ದ ಈಜಿಪ್ಟನ್ನು ಸೇರಿದರು. ಇವರ ಸಂಖ್ಯೆ ದಿನೇ ದಿನೇ ವೃದ್ಧಿಯಾಗುವುದನ್ನು ಕಂಡು ಈಜಿಪ್ಟ್ ಚಕ್ರವರ್ತಿ ಹೀಬ್ರೂಗಳಲ್ಲಿ ಮೊದಲ ಮಗುವನ್ನು ನಿರ್ಮೂಲಮಾಡುವಂತೆ ಅಧಿಕಾರಿಗಳಿಗೆ ಆದೇಶವಿತ್ತ. ಈ ನಾಶಕಾರ್ಯದಲ್ಲಿ ಒಂದು ಮಗು ಫೆರೂ ವಿನ ಮಗಳಿಂದ ಉಳಿದುಕೊಂಡಿತು. ಆಕೆ ಆ ಮಗುವನ್ನು ಸಾಕಿದಳು. ಇವನೇ ಮೋಸಸ್. ಅನಂತರ ಈತ ಪ್ರವಾದಿ ಎಂದು ಕರೆಯಲ್ಪಟ್ಟ. ಇವನು ವಯಸ್ಸಿಗೆ ಬಂದೊಡನೆ ತನ್ನ ವಂಶದ ದೈವ ಯಾವೆಯ ಆದೇಶದ ಮೇರೆಗೆ ಹೀಬ್ರೂ ಜನರನ್ನು ಈಜಿಪ್ಟಿನಿಂದ ಪ್ಯಾಲಿಸ್ತೀನಿಗೆ ಕರೆದುಕೊಂಡು ಹೋದ. ಮೋಸಸ್ ಸಿನೈ ಪರ್ವತದ ಹತ್ತಿರ ಯಾವೆಯಿಂದ ಹತ್ತು ಆದೇಶಗಳನ್ನು (ಟೆನ್‍ಕಮಾಂಡ್‍ಮೆಂಟ್ಸ್) ಪಡೆದು ತನ್ನ ಜನರಿಗೆ ಉಪದೇಶವಿತ್ತ ಪ್ರವಾದಿ ಮೋಸಸನು ಹೀಬ್ರೂ ಜನರ ಒಂದು ಪಂಗಡವನ್ನು ಮಾತ್ರ ಪವಿತ್ರ ಭೂಮಿಗೆ ಹೋಗಿ ಎಂದು ಆದೇಶವಿತ್ತ. ಆದರೆ ಇದಕ್ಕಿಂತ ಮೊದಲೆ ಇನ್ನಿತರ ಪಂಗಡಗಳು ಪ್ಯಾಲಿಸ್ತೀನನ್ನು ಸೇರಿ ನೆಲೆಸಿದ್ದುವು. ಕ್ರಿ.ಪೂ 1200ರಲ್ಲಿ ಫಿಲಿಸ್ಟ್ಯಾನ್ಸ್ ಎಂಬ ಪ್ರಬಲವಾದ ಒಂದು ಪಂಗಡ ಅಶ್ವ, ಎರಡು ಚಕ್ರದ ಬಂಡಿ ಮತ್ತು ಕಬ್ಬಿಣದ ಆಯುಧಗಳನ್ನು ಬಳಸಿಕೊಂಡು ಅಲ್ಲಿ ನೆಲೆಸಿತ್ತು. ಮೋಸಸನ ಜೊತೆ ಹಿಂದಿರುಗಿದ ಹೀಬ್ರೂಗಳು ತಮ್ಮ ಅಸ್ತಿತ್ವವನ್ನು ಅಲ್ಲಿ ಬಲಪಡಿಸಬೇಕಾದರೆ ಅಷ್ಟೊಂದು ಸುಲಭವಿರಲಿಲ್ಲ. ಫಿಲಿಸ್ಟ್ಯಾನ್ ಮತ್ತು ತೇನನ್ಯಾಟ್ ಜನರನ್ನು ಯುದ್ಧದಲ್ಲಿ ಗೆಲ್ಲುವುದು ಮಾತ್ರವಲ್ಲದೆ ತಮ್ಮೊಳಗೆ ಇದ್ದ, ತಮ್ಮ ಪಂಗಡದಲ್ಲಿದ್ದ ವೈಷಮ್ಯವನ್ನು ತೊಲಗಿಸಬೇಕಿತ್ತು. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ತಮ್ಮಲ್ಲೆ ಸಮರ್ಥನಾಯಕನೊಬ್ಬನನ್ನು ಗುರುತಿಸಿ ಅವನನ್ನು ತಮ್ಮ ರಾಜನನ್ನಾಗಿ ಮಾಡಿಕೊಳ್ಳಬೇಕೆಂದು ಪ್ರವಾದಿ ನೆಮ್ಯುವೆಲ್ ತಿಳಿಸಿದ. ಅದರಂತೆ ಹೀಬ್ರೂಗಳ ಮೊದಲ ಅರಸನಾಗಿ ಸಾವುಲನನ್ನು ನೇಮಿಸಲಾಯಿತು. ಇವನು ತನ್ನ ಪಂಗಡದ ಏಳ್ಗೆಗಾಗಿ ಶ್ರಮಿಸಿದ. ಇದರಿಂದಾಗಿ ಎಲ್ಲರು ಒಗ್ಗಟ್ಟಿನಿಂದ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡರು ಹಾಗೂ ಐಕ್ಯಮತದ ಪ್ರಾಮುಖ್ಯವನ್ನು ಅರ್ಥಮಾಡಿಕೊಂಡರು. ದಾವಿದ ಹೀಬ್ರೂಗಳ ಎರಡನೆಯ ಅರಸ. ಇವನು ಧೈರ್ಯಶಾಲಿಯೂ ಬುದ್ಧಿವಂತನೂ ಆಗಿದ್ದು ತನ್ನ ಸಮುದಾಯದ ಪ್ರಗತಿಗೆ ಬೇಕಾದ ಭದ್ರಬುನಾದಿಯನ್ನು ನಿರ್ಮಿಸಿದನೆಂದು ಹೇಳಬಹುದು. ಜೆರುಸಲೇಮ್ ನಗರವನ್ನು ಸ್ವಾಧೀನಪಡಿಸಿಕೊಂಡು ಅದನ್ನು ರಾಜಕೀಯ ಕೇಂದ್ರವಾಗಿಯೂ ಧಾರ್ಮಿಕ ಕೇಂದ್ರವಾಗಿಯೂ ಪರಿವರ್ತಿಸಿದ. ಇವನು ಸಾಹಿತ್ಯ, ಸಂಗೀತ ಪ್ರೇಮಿಯಾಗಿದ್ದು ಮಾತ್ರವಲ್ಲದೆ ನ್ಯಾಯನಿಷ್ಠನೂ ವಿಚಾರಪರನೂ ಆಗಿದ್ದ. ಹೀಬ್ರೂ ರಾಜ್ಯ ಅತ್ಯುನ್ನತ ಮಟ್ಟವನ್ನು ಸಾಲಮನ್ ಕಾಲದಲ್ಲಿ ಮುಟ್ಟಿತು. ಇವನು ಕ್ರಿಪೂ 995ರಲ್ಲಿ ಪಟ್ಟವೇರಿದ. ಸಾಲಮನ್ ನೆರೆಹೊರೆ ರಾಷ್ಟ್ರಗಳೊಡನೆ ಮೈತ್ರಿ ಒಪ್ಪಂದ ಮಾಡಿಕೊಂಡು ಕೆಲವು ಪ್ರದೇಶಗಳೊಡನೆ ವ್ಯಾಪಾರ ಸಂಬಂಧವನ್ನು ಬೆಳೆಸಿಕೊಂಡು ತನ್ನ ರಾಜ್ಯದ ಗೌರವ ಮತ್ತು ಪ್ರತಿಷ್ಠೆ ಹೆಚ್ಚಿಸಿದ. ಜೆರುಸಲೇಮ್ ನಗರವನ್ನು ಸುಂದರ ನಗರವನ್ನಾಗಿ ನಿರ್ಮಿಸಿದ. ಇವನಿಂದ ನಿರ್ಮಿಸಲ್ಪಟ್ಟ ಅರಮನೆ ಸುಂದರವಾಗಿದ್ದು ಲೆಬನಾಲಿನ್ ಅಡವಿಯ ಮನೆ ಎಂಬ ಹೆಸರು ಪಡೆಯಿತು. ಇವನು ಬುದ್ಧಿಶಕ್ತಿ, ವಿಚಾರಗಳಿಗೆ ಸುಪ್ರಸಿದ್ಧ ನಾಗಿದ್ದರೂ ತನ್ನ ಪ್ರಜೆಗಳ ವಿಶ್ವಾಸ ಪಡೆಯುವಲ್ಲಿ ವಿಫಲನಾದ. ಅರಮನೆ ವೆಚ್ಚ, ವಿದೇಶಿ ರಾಣಿಯ ವಿಲಾಸೀಜೀವನಕ್ಕೆ ದುಂದುವೆಚ್ಚಮಾಡಿ ಬೊಕ್ಕಸ ಬರಿದುಮಾಡಿದ. ಅದನ್ನು ಸರಿದೂಗಿಸಲು ಪ್ರಜೆಗಳ ಮೇಲೆ ಅಧಿಕ ತೆರಿಗೆಯನ್ನು ವಿಧಿಸಿದ ಇದರಿಂದ ಪ್ರಜೆಗಳ ಅತೃಪ್ತಿಗೆ ಕಾರಣನಾದ. ಇವನು ಹೀಬ್ರೂಗಳ ಕುಲದೇವರಾದ ಯಾವೆಯ ಸ್ಮಾರಕವಾಗಿ ನಿರ್ಮಿಸಿದ ದೇವಾಲಯ ಸುಪ್ರಸಿದ್ಧವಾಗಿದೆ.

	ಇವನ ಕಾಲಾನಂತರದಲ್ಲಿ ಹೀಬ್ರೂಗಳ ಒಗ್ಗಟ್ಟಿನ ಕೊರತೆಯಿಂದಾಗಿ ಉತ್ತರ ಪ್ಯಾಲಿಸ್ತೀನ್‍ನ ಹತ್ತು ಪಂಗಡಗಳು ಸೇರಿ ಇಸ್ರೇಲ್ ರಾಜ್ಯವಾಗಿ, ದಕ್ಷಿಣದ ಎರಡುಪಂಗಡಗಳು ಸೇರಿ ಜುಡಾ ರಾಜ್ಯವಾಗಿ ಪರಿವರ್ತಿ ಸಲ್ಪಟ್ಟವು. ಆದರೆ ಇವುಗಳ ಸ್ವಾತಂತ್ರ್ಯ ಬಹುಕಾಲ ಉಳಿಯಲಿಲ್ಲ. ಕ್ರಿ.ಪೂ 722ರಲ್ಲಿ ಅಸ್ಸೀರಿಯನ್ನರು ಇಸ್ರೇಲ್ ರಾಜ್ಯವನ್ನು ಧ್ವಂಸಮಾಡಿದರು. ಜುಡಾ ರಾಜ್ಯದ ಪತನ ಕ್ರಿ.ಪೂ 586ರಿಂದ ಆರಂಭವಾಯಿತು. ಆ ವರ್ಷದಲ್ಲಿ ಬ್ಯಾಬಿಲಾನಿನ ಕಾಲ್ಡಿಯನ್ನರ ಅರಸ ಎರಡನೆಯ ನೆಬುಚಡ್ನಜಾಸರನು ಹೀಬ್ರೂಗಳನ್ನು ಸಂಪೂರ್ಣನಾಶಕ್ಕಾಗಿ ಅವರಲ್ಲಿಯೇ ಮೇಧಾವಿಗಳಾದ 10,000 ಮಂದಿಯನ್ನು ಬ್ಯಾಬಿಲಾನಿಯಕ್ಕೆ ಒಯ್ದು ಸೆರೆಯಲ್ಲಿರಿಸಿದ. ಪರ್ಷಿಯದ ಸೈರಸನ ನೇತೃತ್ವದಲ್ಲಿ ಇವರ ಬಿಡುಗಡೆಯಾಯಿತು. ಅನಂತರ ಹೀಬ್ರೂಗಳ ಪುನರ್ ಸಂಘಟನೆಗೆ ನೆಹೇಮಿಯ ಎಂಬ ನಾಯಕ ಕಾರಣನಾದ. ಆದರೆ ಸಾಲೊಮನ್‍ನ ಕಾಲದ ವೈಭವವನ್ನು ಪುನಃ ಇವರು ಪಡೆಯದಾದರು; ಪರ್ಷಿಯ, ಗ್ರೀಕ್, ರೋಮ್ ಪ್ರಭುತ್ವದ ಅಧೀನದಲ್ಲಿ ಇವರು ಇರಬೇಕಾಯಿತು.

	ಹೀಬ್ರೂ ಜನರ ಗಮನಾರ್ಹ ಕೊಡುಗೆ ಎಂದರೆ ಇವರು ಧಾರ್ಮಿಕ ಕ್ಷೇತ್ರದಲ್ಲಿ  ಕೈಗೊಂಡ ಕ್ರಾಂತಿ. ಇವರು ರಾಜಕೀಯ, ಸಮಾಜನಿರ್ಮಾಣ ಮತ್ತು ಇನ್ನಿತರ ವ್ಯವಹಾರಕ್ಷೇತ್ರಗಳಲ್ಲಿ ಹೆಚ್ಚಿನ ಸಾಧನೆಮಾಡಲಿಲ್ಲ. ಪ್ರಾಚೀನಕಾಲದ ಜನರಲ್ಲಿ ಏಕ ದೇವರನ್ನು ಪೂಜಿಸಿ ಅವನೊಬ್ಬನಲ್ಲೇ ವಿಶ್ವಾಸವಿಟ್ಟು ಧರ್ಮಕ್ಷೇತ್ರದಲ್ಲಿ ಏಕೇಶ್ವರವಾದವನ್ನು ಸ್ಥಾಪಿಸಿದವರಲ್ಲಿ ಇವರೇ ಅಗ್ರಗಣ್ಯರು. ಹೀಬ್ರೂಗಳ ದೇವರು ಯಾವೆ (ಆಂಗ್ಲರು ಜೆಹೋವಾ ಎಂದು ಕರೆಯುವ ದೇವರು). ಈತನು ಜನರ ಯೋಗ್ಯತೆಗಳ ನಿರ್ಮಾಪಕ. ಕಾರುಣ್ಯನಿಧಿ, ಸರ್ವಶಕ್ತ. ತನ್ನಭಕ್ತರು ನೀತಿವಂತರೂ ದಯಾಪರರೂ, ಸುಶೀಲರೂ ಆಗಿದ್ದು ಪರಸ್ಪರ ಸಹೋದರತೆಯಿಂದ ಇರಬೇಕೆಂದು ಸದಾ ಆಶಿಸುವವನು. ಹೀಬ್ರೂಗಳು ಪ್ಯಾಲಿಸ್ತೀನ್ ಸೇರಿದ ಅನಂತರವೇ ಯಾವೆ ಇವರ ಪವಿತ್ರ ಆರಾಧ್ಯ ದೇವರಾದುದು. ಯಾವೆ ದೇವರ ಇಂಗಿತವೆನೆಂದರೆ “ಸರ್ವೇಶ್ವರನಾದ ದೇವರು ಪ್ರಪಂಚದಲ್ಲಿ ಪ್ರೀತಿಯಿಂದ ರಾಜ್ಯ ನಿರ್ಮಾಣ ಮಾಡುತ್ತಾನೆ. ಈ ರಾಜ್ಯದಲ್ಲಿ ಹೀಬ್ರೂಗಳು ಸುಸಂಸ್ಕøತಜನರಾಗಿ ಮೆರೆಯುವರು ದಾಪಿಹೂನ ಪುತ್ರನೊಬ್ಬ ಉದ್ಧಾರಕ ಅವತರಿಸಿ ಈ ಧರ್ಮಕ್ಷೇತ್ರವಾದ ರಾಜ್ಯವನ್ನು ಆಳುವನು. ಪ್ರಂಪಂಚವು ಸೀತೆಯ ನಿಯಮವನ್ನು ಅವಲಂಬಿಸಿ ಮುಂದುವರಿಯುತ್ತಿದೆ. ಈ ಸೀತೆಯ ನಿಯಮವೆಂದರೆ ದೇವರಿಚ್ಛೆ.”

	ಹೀಬ್ರೂಗಳು ತಮ್ಮ ಚರಿತ್ರೆಯನ್ನು ತಾವೇ ಬರೆದಿದ್ದಾರೆ. ಇವರ ಧಾರ್ಮಿಕ ಅಭಿಪ್ರಾಯಗಳೇ ಬೈಬಲ್ ಎನಿಸಿದೆ. ಕಾಲ್ಡಿಯನರ ಅರಸ ನೇಬುಚಡ್ನಸಾರನು ಹೀಬ್ರೂಗಳನ್ನು ಸೆರೆಹಿಡಿರು ಬ್ಯಾಬಿಲಾನಿನಲ್ಲಿ ಇರಿಸಿದ ಅವಧಿಯಲ್ಲಿ ಸ್ಫೂರ್ತಿಗೊಂಡು ಬೈಬಲಿನ ಮೊದಲ ಭಾಗವಾದ ಹಳೆ ಒಡಂಬಡಿಕೆ ರೂಪದಲ್ಲಿ ತಮ್ಮ ಚರಿತ್ರೆಯನ್ನು ಹೀಬ್ರೂಗಳು ಬರೆದರು. ಈ ಹಳೆ ಒಡಂಬಡಿಕೆಯ ಹೆಚ್ಚಿನ ಅಂಶ ಉತ್ತಮರೀತಿಯ ಸಾಹಿತ್ಯವಾಗಿ ಇಂದಿಗೂ ಉಳಿದುಬಂದಿದೆ. ಇದರಲ್ಲಿ ಮೂರು ವಿಭಾಗಗಳಿವೆ. ಮೊದಲಿನ ಐದು ಪುಸ್ತಕಗಳು ಕಾನೂನು ಎಂದು ಕರೆಯಲ್ಪಡುತ್ತವೆ. ಚಾರಿತ್ರಿಕ ಹಾಗೂ ಇತರ ವಿಷಯಗಳನ್ನು ಇಸಯ್ಯಾನಿಂದ ಮಲಾಚಿವರೆಗಿನ ಪ್ರವಾದಿಗಳ ವಿವರಗಳನ್ನು ಒಳಗೊಂಡ ಭಾಗ ಪ್ರವಾದಿಗಳದು ಎಂದು ತಿಳಿಯಲಾಗಿದೆ. ಒಡಂಬಡಿಕೆಯ ಇತರ ಅಂಶಗಳನ್ನು ಒಳಗೊಂಡ ಭಾಗ “ಪಿತೃಗಳ ಇತರ ಬರೆಹಗಳು” ಎಂದು ಹೆಸರಿಸಲಾಗಿದೆ. ಹೀಬ್ರೂಗಳನ್ನು ಕ್ರೈಸ್ತರಾಗಿ ಸ್ಫೂರ್ತಿವಂತರಾಗಿ ಮಾಡಿದ ಗ್ರಂಥವೇ ಬೈಬಲ್ ಇದು ಚರಿತ್ರೆ, ನಿಯಮ, ಕಾಲಜ್ಞಾನ ಧರ್ಮ ಮತ್ತು ಸಾಹಿತ್ಯಗಳ ಸಂಗಮವಾಗಿದೆ.		
(ಪಿ.ಜಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ